ಆನು ಏಣಿನ ಜೋಡಣೆ
	-ಎರಡು ಫಲಕಗಳ ಜೋಡಣೆಯಲ್ಲಿ ಒಂದರ ಏಣು ಅಥವಾ ಅಂಚು ಇನ್ನೊಂದರದಕ್ಕೆ ಆನಿರುವ ವಿಧಾನ (ಬಟ್ಟ್ ಜಾಯಿಂಟ್). ಮೂರನೆಯ ಫಲಕವೊಂದನ್ನು (ಆವರಣಫಲಕವೆಂದು ಇದರ ಹೆಸರು) ಜೋಡಣೆಗೊಳಿಸಬೇಕಾದ ಎರಡು ಫಲಕಗಳ ಮೇಲೆಯೂ ಸ್ವಲ್ಪ ಚಾಚಿರುವಂತೆ ಇಟ್ಟು, ಒಂದೊಂದು ಫಲಕಕ್ಕೂ ಒಂದು ಸಾಲು ರಿವೆಟ್ಟುಗಳಿಂದ ಬಂಧಿಸುವುದು ಸರಳ ರೀತಿಯ ಜೋಡಣೆ. ಇಂಥ ಜೋಡಣೆಯಲ್ಲಿ ಪ್ರಧಾನ ಫಲಕಗಳು ಸೆಳೆತಕ್ಕೆ ಒಳಗಾದಾಗ ಜೋಡಣೆ ಬಾಗುವ ಸಂಭವ ಇದೆ. ಈ ಕಾರಣದಿಂದ ಒತ್ತಡದ ಪಾತ್ರೆಗಳಿಗೆ ಸರಳರೀತಿಯ ಜೋಡಣೆ ಸಮರ್ಪಕವಲ್ಲ. ಒಂದರ ಬದಲು ಎರಡೂ ಕಡೆ ಆವರಣ ಫಲಕಗಳನ್ನಿಟ್ಟು ಒಂದಕ್ಕಿಂತ ಹೆಚ್ಚು ಸಾಲು ರಿವೆಟ್ಟುಗಳಿಂದ ಬಂಧಿಸಿದರೆ ಜೋಡಣೆ ಹೆಚ್ಚು ಬಲಯುತವಾಗುವುದು ಮತ್ತು ಮೇಲೆ ಹೇಳಿದ ನ್ಯೂನತೆ ತಲೆದೋರದು. ಅಲ್ಲದೆ ಜೋಡಣೆಯ ಸ್ಥಳದಲ್ಲಿ ಪಾತ್ರೆಯ ಒಳಗಿರುವ ಒತ್ತಡದ ದ್ರವ ಅಥವಾ ಅನಿಲ ಹೊರತೂರದಂತೆ ಎರಡೂ ಕಡೆಯ ಆವರಣ ಫಲಕಗಳ ಎರಡು ಅಂಚಿನಲ್ಲೂ ಗಿಡಗಿ ಭದ್ರಪಡಿಸುವ ಸಾಧ್ಯತೆಯೂ ಇದೆ. ಎರಡು ಅಥವಾ ಹೆಚ್ಚು ಸಾಲು ರಿವೆಟ್ಟುಗಳಿರುವಾಗ ಅವುಗಳ ವಿನ್ಯಾಸ ಸರಪಣಿಯಂತೆಯೋ ವಂಕಿವಂಕಿಯಾಗಿಯೋ ಇರಬಹುದು. ಕೆಲವು ಬಾರಿ ಹೊರಸಾಲುಗಳಲ್ಲಿನ ರಿವೆಟ್ಟುಗಳ ಪರಸ್ಪರ ದೂರ ಒಳಸಾಲುಗಳಲ್ಲಿನ 1 1/2 ಅಥವಾ 2ರಷ್ಟಿರುವುದೂ ಉಂಟು. ಎರಡು ಆವರಣಫಲಕಗಳನ್ನು ಬಳಸಿದಾಗ ಒಂದೊಂದರ ದಪ್ಪ ಪ್ರಧಾನಫಲಕದ 5/8 ರಷ್ಟೂ ಒಂದೇ ಆವರಣಫಲಕ ಇರುವಾಗ ಅದರ ದಪ್ಪ ಪ್ರಧಾನಫಲಕದ 5/4 ರಷ್ಟೂ ಇರುವುದು ಸಾಮಾನ್ಯ ರೂಢಿ. ಆವರಣಫಲಕಗಳ ಅಂಚುಗಳು ನೇರವಾಗಿರಬಹುದು ಅಥವಾ ಅವು ವಂಕಿಯಾಗಿ ಕತ್ತರಿಸಲ್ಪಟ್ಟಿರಬಹುದು. ರಿವೆಟ್ಟುಗಳಿಂದ ಮಾತ್ರವಲ್ಲದೆ ಬೆಸುಗೆಯಿಂದಲೂ ಇಂಥ ಜೋಡಣೆಗಳನ್ನು ಮಾಡಬಹುದು. ವಿದ್ಯುತ್‍ರೋಧಿತ್ವ ಬೆಸುಗೆಯ (ರೆಸಿಸ್ಟೆನ್ಸ್ ವೆಲ್ಟಿಂಗ್) ಕ್ರಮದಿಂದ ಫಲಕಗಳ ಅಂಚುಗಳನ್ನು ಒತ್ತಿ ಹಿಡಿದು ಕಡಿಮೆ ವೋಲ್ಟೇಜಿನ ಅಧಿಕ ವಿದ್ಯುತ್ಪ್ರವಾಹವನ್ನು ಹರಿಸುವುದರಿಂದ ಲೋಹದ ಉಷ್ಣತೆ ಕರುಗುವ ಮಟ್ಟಕ್ಕೇರಿ ಅಂಚುಗಳು ಕೂಡಿಕೊಳ್ಳುತ್ತವೆ. ವಿದ್ಯುಚ್ಚಾಪದ ಅಥವಾ ಅನಿಲದ ಬೆಸುಗೆಯ (ಆರ್ಕ್ ಆರ್ ಗ್ಯಾಸ್ ವೆಲ್ಡಿಂಗ್) ಕ್ರಮದಲ್ಲಿ ಫಲಕಗಳ ಅಂಚುಗಳ ನಡುವೆ ಸಂದುಬಿಡಿಸಿದ್ದು ಅದನ್ನು ಬೆಸುಗೆಯ ಕಬ್ಬಿಣದ ಕಡ್ಡಿಯನ್ನು ಕರಗಿಸಿ ತುಂಬಲಾಗುತ್ತದೆ. ಬೆಸುಗೆಯ ಹಿಡಿತ ಹೆಚ್ಚು ಭದ್ರವಾಗಿಸಲೋಸುಗ ದಪ್ಪವಾದ ಫಲಕಗಳ ಅಂಚುಗಳನ್ನು ಗಿ-ಆಕಾರವಾಗಿಯೋ U-ಆಕಾರವಾಗಿಯೋ ಕತ್ತರಿಸಿದ್ದು ವೆಜ್ಜದಲ್ಲಿ (ಗ್ರೂವ್) ಲೋಹ ತುಂಬಲಾಗುತ್ತದೆ. ಸರಿಯಾದ ರೀತಿಯಲ್ಲಿ ಮಾಡಿದ ಬೆಸುಗೆಯ ಜೋಡಣೆ ಅಖಂಡ ಫಲಕದಷ್ಟೇ ಬಲಯುತ. ಅದೇ ರಿವೆಟ್ಟುಗಳಿಂದ ಆದ ಜೋಡಣೆ ಅಷ್ಟು ಬಲಯುತವಲ್ಲ.													
(ಬಿ.ಆರ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ